ಶಾಂತಾರಾಮ್, ವಿ 
1901-90. ಪ್ರಸಿದ್ಧ ಚಲನಚಿತ್ರ ದಿಗ್ದರ್ಶಕ, ನಟ ಹಾಗೂ ನಿರ್ಮಾಪಕ. ಭಾರತೀಯ ಚಿತ್ರರಂಗಕ್ಕೆ ಇತ್ತ ಮಹತ್ತರ ಕೊಡುಗೆಗಾಗಿ 1985ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕøತರು. ವಣಕುದುರೆ ಶಾಂತಾರಾಮ್ ಇವರ ಪೂರ್ಣಹೆಸರು. ಮೂಕಿಯಿಂದ ಟಾಕಿ ಚಿತ್ರಗಳವರೆಗೆ ಇವರ ದಾಖಲೆಗಳಿವೆ. ಇವರು ಮಾಡಿದ ಒಟ್ಟು ಚಿತ್ರಗಳು 95. ಬಿಜಾಪುರ ಜಿಲ್ಲೆಯ ವಣಕುದುರೆಯಲ್ಲಿ 1901 ನವಂಬರ್ 18ರಂದು ಜನಿಸಿದರು. ತಂದೆ ರಾಜ, ತಾಯಿ ಕಮಲ್. ಮುಂದೆ ಇವರು ತಮ್ಮ ಕಲಾಮಂದಿರಕ್ಕೆ ತಂದೆತಾಯಿಗಳ ಹೆಸರು ಸೇರಿಸಿ ರಾಜಕಮಲ್ ಸ್ಟುಡಿಯೋ ಎಂದು ಕರೆದರು. ಮೊದಲ ಹೆಂಡತಿ ವಿಮಲಾಬಾಯಿ, ಅಥಣಿಯ ಕನ್ನಡತಿ, ಎರಡನೆಯ ಹೆಂಡತಿ ಪ್ರಸಿದ್ಧ ನಟಿ ಜಯಶ್ರೀ, ಖ್ಯಾತತಾರೆ ಸಂಧ್ಯಾ ಮೂರನೆಯವರು.

	ಇವರದು ಮೊದಲಿನಿಂದಲೂ ಹೋರಾಟದ ಬದುಕು. ಆರಂಭದಲ್ಲಿ ಹುಬ್ಬಳ್ಳಿಯ ರೈಲ್ವೆ ವರ್ಕ್‍ಷಾಪ್‍ನಲ್ಲಿ ಫಿಟ್ಟರ್ ಆಗಿದ್ದರು. ಪುಣೆಯಲ್ಲಿ ಗಂಧರ್ವ ನಾಟಕ ಮಂಡಳಿಯ ಖ್ಯಾತ ನಾಟಕಕಾರ ರಾಮ್ ಗಣೇಶ್ ಗಡಕರಿ ಅವರ ನಿಕಟ ಸಂಬಂಧದಿಂದಾಗಿ ಸೌಭದ್ರ ನಾಟಕದಲ್ಲಿ ರುಕ್ಮಿಣಿಯ ದಾಸಿಯ ಪಾತ್ರದ ಮೂಲಕ ರಂಗಭೂಮಿ ಪ್ರವೇಶ ಪಡೆದರು. ಡೆಕ್ಕನ್ ಸಿನಿಮಾದಲ್ಲಿ ಡೋರ್‍ಕೀಪರ್ ಆಗಿದ್ದರು; ಫಾಲ್ಕೆಯವರ ಲಂಕಾದಹನ, ಭಸ್ಮಾಸುರ ಮೋಹಿನಿ, ಕೃಷ್ಣಜನ್ಮ-ಮುಂತಾದ ಮೂಕಿ ಚಿತ್ರಗಳನ್ನು ನೋಡಿ ಪ್ರಭಾವಿತರಾಗಿ  ತಿಂಗಳಿಗೆ 9 ರೂಪಾಯಿ ಸಂಬಳದ ಮೇಲೆ ಸುರೇಖಾಹರಣದಲ್ಲಿ ಭಗವಾನ್ ವಿಷ್ಣುವಿನ ಪಾತ್ರದ ಮೂಲಕ ಸಿನಿಮಾ ಪ್ರಪಂಚಕ್ಕೆ ಪದಾರ್ಪಣ ಮಾಡಿದರು (1930 ಜೂನ್ 20). ಮಹಾರಾಷ್ಟ್ರ ಫಿಲ್ಮ್‍ಕಂಪನಿ ನಡೆಸುತ್ತಿದ್ದ ಕೊಲ್ಲಾಪುರದ ಬಾಬುರಾವ್ ಪೈಂಟರ್ ಕೃಪೆಗೆ ಪಾತ್ರರಾದರು. ಅವರೇ ಇವರಿಗೆ ಸಿನಿಮಾ ಗುರುವಾ ದರು. ಬಟ್ಟೆ ಒಗೆಯುವುದು, ಪಾತ್ರೆ ತಿಕ್ಕುವುದು - ಹೀಗೆ ಗುರುಸೇವೆ ಮಾಡಿ ಸಿನಿಮಾ ತಂತ್ರ ಕಲಿತರು. ಮೊದಲ ಚಿತ್ರಕ್ಕೇ ನೇತಾಜಿ ಫಾಲ್ಕರ್ ಪ್ರಶಸ್ತಿ ದೊರಕಿತು. ಮೊತ್ತಮೊದಲ ಪ್ರಯೋಗಾತ್ಮಕ ಚಿತ್ರ ಎನಿಸಿದ ಸಾವಕಾರೀಪಾಶ್‍ನಲ್ಲಿ ಪ್ರಮುಖ ಪಾತ್ರ ಪಡೆದರು. ದಾಮ್ಲೆ, ಫತ್ತೆಲಾಲ್, ಪೈ, ಸಾಯಬರ - ಇವರ ಜೊತೆಗೂಡಿ ಕೊಲ್ಲಾಪುರದಲ್ಲಿ ಪ್ರಭಾತ್ ಸ್ಟುಡಿಯೋ ಆರಂಭಿಸಿದರು. ಮುಂದೆ ಪುಣೆಗೆ ಸ್ಥಳಾಂತರ ಮಾಡಿ ಅದನ್ನು ಏಷ್ಯದಲ್ಲೇ ಅತಿದೊಡ್ಡ ಚಿತ್ರಕಲಾಮಂದಿರವಾಗಿ ಬೆಳೆಸಿದರು. ಮೊದಲಚಿತ್ರ ಗೋಪಾಲಕೃಷ್ಣ. ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿ ಬಂದ ಆ ಚಿತ್ರದ ಕಂಸ ಬ್ರಿಟಿಷ್ ರಾಜಸತ್ತೆಯ ಪ್ರತೀಕ ವಾದರೆ, ಕೃಷ್ಣ ಪ್ರಜಾಪ್ರತಿನಿಧಿಯ ಪ್ರತೀಕವಾದ. ಪ್ರಭಾತದ ಪ್ರಗತಿಪರ ಚಿತ್ರಗಳಿಗೆ ಬದಲಾಗುತ್ತಿರುವ ಸಮಾಜದಲ್ಲಿ ಅಪಾರ ಮೆಚ್ಚುಗೆ ದೊರೆಯಿತು. ಸ್ತ್ರೀಸ್ವಾತಂತ್ರ್ಯದ ವಸ್ತುವುಳ್ಳ ಅಮರ ಜ್ಯೋತಿ, ವೆನಿಸ್‍ನಲ್ಲಿ ಪ್ರದರ್ಶಿತವಾದ ಮೊದಲ ಭಾರತೀಯ ಚಿತ್ರವಾಯಿತು. ಅನೇಕ ಸ್ವರ್ಣಪದಕಗಳನ್ನು ಗಿಟ್ಟಿಸಿತು. ದುನಿಯಾ ನ ಮಾನೆ ಸಂಗೀತ, ನೃತ್ಯ, ಪ್ರೇಮಪ್ರಸಂಗ ಯಾವುದೂ ಇಲ್ಲದ ಭಾರತದ ಪ್ರಥಮ ಚಿತ್ರ. ಇಲ್ಲಿ ಅಭಿನಯಿಸಿದ ಎಲ್ಲ ನಟನಟಿಯರು ದೊಡ್ಡ ಕಲಾವಿದರಾಗಿ ಹೊರಬಂದರು.

	ಒಂಬತ್ತು ವರ್ಷ ಗೆಳೆ ಯರೊಂದಿಗೆ ದುಡಿದ ಇವರು ಪ್ರಭಾತ್ ಸ್ಟುಡಿಯೋ ದಿಂದ ಹೊರಬಂದಾಗ ವೃತ್ತಿಯಲ್ಲಿ ದೊಡ್ಡ ಸವಾಲು ಎದುರಿಸಬೇಕಾಯಿತು. ಅನಂತರ ರಾಜಕಮಲ್ ಕಲಾಮಂದಿರ ಸ್ಥಾಪಿಸಿದರು. ಅವರ ಮೊದಲ ಚಿತ್ರ ಶಾಕುಂತಲಾ. ಇದು ಅಪಾರ ಯಶಸ್ಸು ಗಳಿಸಿತು. ಅನಂತರ ಡಾಕ್ಟರ್ ಕೋಟ್ನೀಸ್ ಕಿ ಅಮರ್ ಕಹಾನಿ, ದಹೇಜ್, ಅಪನಾದೇಶ್, ಅಮರ ಭೂಪಾಳಿ, ಪರಛಾಯೀ, ದೋ ಆಂಖೇ ಬಾರಾ ಹಾತ್, ಪಿಂಜರಾ, ಝನಕ್ ಝನಕ್ ಪಾಯಲ್ ಬಾಜೆ ಮೊದಲಾದ ಸಾರ್ಥಕವಾದ ಸಾರ್ವಕಾಲಿಕ ಚಿತ್ರಗಳನ್ನು ಮಾಡಿದರು; ತಮ್ಮ ಸಂದೇಶವನ್ನು ತಮ್ಮ ಚಿತ್ರಗಳ ಮೂಲಕವೇ ಹೇಳಿದರು. ಶಾಂತಾರಾಮ್ ಟಚ್ ಎಂಬುದು ಸಿನಿಮಾರಂಗದಲ್ಲಿ ಒಂದು ಆಡು ಮಾತಾಯಿತು. ದಹೇಜ್ ಚಿತ್ರದ ಪ್ರಭಾವ ಆ ಕಾಲದಲ್ಲಿ ಎಷ್ಟಾಯಿತೆಂದರೆ ಬಿಹಾರದ ವಿಧಾನಸಭೆ ವರದಕ್ಷಿಣೆ ನಿಷೇಧ ಕಾನೂನನ್ನೇ ಮಾಡಿತು. ಅಮರ ಭೂಪಾಳಿಗೆ ಫ್ರಾನ್ಸಿನ ಕ್ಯಾನೆ ಚಿತ್ರೋತ್ಸವದಲ್ಲಿ ಬಂದ ಗ್ರಾಂಡ್ ಪ್ರೀ ಪಾರಿತೋಷಿಕವೂ ಸೇರಿದಂತೆ ಹಲವು ಪ್ರಶಸ್ತಿಗಳು ಬಂದವು. ಝನಕ್ ಝನಕ್ ಪಾಯಲ್‍ಬಾಜೆ ಮೂಲಕ ಥಿಯೇಟರ್ ಮಾಲೀಕನಿಗೆ ಸೆ. 65 ಲಾಭಾಂಶ ಸಲ್ಲುತ್ತಿದ್ದ ಸಂಪ್ರದಾಯವನ್ನು ಮುರಿದು ಚಿತ್ರ ನಿರ್ಮಾಪಕನಿಗೂ ಸಮಪಾಲು ಬರುವಂತೆ ಮಾಡಿದರು. ಈ ಚಿತ್ರದ ಯಶಸ್ಸಿಗಾಗಿ ನಡೆದ ಮುಂಬಯಿ ನಾಗರಿಕರ ಅಭಿನಂದನಾ ಸಭೆಯಲ್ಲಿ ಆಚಾರ್ಯ ಅತ್ರೆಯವರು ಇವರನ್ನು ಚಿತ್ರಪತಿ ಎಂದದ್ದು ಒಂದು ಬಿರುದಾಗಿಯೇ ಉಳಿಯಿತು. ದೋ ಆಂಖೇ ಬಾರಾ ಹಾತ್‍ಗೆ ಬರ್ಲಿನ್ ಚಿತ್ರೋತ್ಸವದಲ್ಲಿ ಸಂದ ಗೋಲ್ಡನ್ ಚೇರ್ ಪ್ರಶಸ್ತಿ, ಅಮೆರಿಕೆಯ ಅಂತಾರಾಷ್ಟ್ರೀಯ ವೃತ್ತ ಪತ್ರಿಕಾ ಸಂಸ್ಥೆಯ ಪಾರಿತೋಷಿಕ ಶಾಂತಾರಾಮ್‍ರ ಪ್ರತಿಭೆಯ ಹೆಗ್ಗುರುತುಗಳು. ಶಾಂತಾರಾಮಾ ಇವರ ಆತ್ಮಕತೆ. ಇವರು ಹೇಳಿದ್ದನ್ನು 8-10 ವರ್ಷಗಳಲ್ಲಿ ಸತತವಾಗಿ ಬರೆದಿಟ್ಟವರು ಇವರ ಮಗಳು ಮಧುರಾ ಜಸ್‍ರಾಜ್. ಇದೊಂದು ಅಲೌಕಿಕ ವಾಸ್ತವಿಕ ಸಂಗತಿಗಳ ಗ್ರಂಥ, ಭಾರತೀಯ ಚಿತ್ರರಂಗದ ಬೆಳೆವಣಿಗೆಯ ಇತಿಹಾಸ ಕೃತಿ ಕೂಡ ಎನ್ನಲಾಗಿದೆ. ಇವರು 1990 ಅಕ್ಟೋಬರ್ 30ರಂದು ಮುಂಬಯಿಯಲ್ಲಿ ನಿಧನರಾದರು.    	
		 (ವಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ